ಮಾನ್ಯರೆ,
ಲಂಬಾಣಿ ಮತ್ತಿತರ ಶೋಷಿತ ದಲಿತ-ಬುಡಕಟ್ಟುಗಳ ತಾಂಡ, ಹಟ್ಟಿ, ಹಾಡಿ, ಪಲ್ಲಿ, ಗಲ್ಲಿ, ವಾಡಿ, ಪಾಳ್ಯ ವಾಸಿಗರಿಗೆ ಭೂ ಒಡೆತನ ಮತ್ತು ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಉದ್ದೇಶದ ಕ್ರಮ ಸಂಖ್ಯೆ 37 ರ ‘ಕರ್ನಾಟಕ ಭೂ ಸುಧಾರಣೆಗಳ ವಿಧೇಯಕ-2016’ ಅನ್ನು ಅನುಮೋದಿಸಲು ರಾಷ್ಟ್ರಪತಿಯವರನ್ನು ಕೋರುತ್ತೆವೆ.
ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಳೆದರು ಲಂಬಾಣಿ ಮತ್ತಿತರ ಸಮುದಾಯದ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿಲ್ಲ. ಹಾಗಾಗಿ ಯಾರದೊ ಖಾಸಗಿ ಮಾಲಿಕತ್ವದ ಜಮೀನಿನಲ್ಲಿ, ಅರಣ್ಯ ಭೂಮಿಯಲ್ಲಿ, ಬಗರ್ ಹುಕುಂ ಜಮೀನಿನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಯವರೆಗೆ ತಮ್ಮ ಮನೆಯ ಹಕ್ಕು ಪತ್ರ ಯಾರ ಹೆಸರಲ್ಲಿದೆ ಎಂಬ ಮಾಹಿತಿಯೆ ಈ ಸಮುದಾಯಗಳಿಗೆ ಇಲ್ಲ.
ಕಂದಾಯ ಗ್ರಾಮಗಳಾಗಿಲ್ಲದ ಕಾರಣಕ್ಕಾಗಿ ನಾಗರಿಕ ಸೌಲಭ್ಯಗಳಾದ ರಸ್ತೆ, ಸಾರಿಗೆ, ಸರ್ಕಾರಿ ಕಛೇರಿ, ವಿದ್ಯುತ್, ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಅಂಗನವಾಡಿ, ಪಂಚಾಯತ, ಇತ್ಯಾದಿ ಮೂಲಸೌಕರ್ಯಗಳಿಂದ ಲಂಬಾಣಿಗರು ವಂಚಿತರಾಗಿದ್ದಾರೆ.
ಜನವಸತಿಗೆ ಶಾಶ್ವತ ನೆಲೆ ಇಲ್ಲದ ಕಾರಣ ವಲಸೆ, ಅಲೆಮಾರಿಗಳಂತೆ ಈ ಸಮುದಾಯ ತಿರುಗಾಡುತ್ತಿದೆ. ಮಕ್ಕಳ ಮಾರಾಟ, ಮಹಿಳೆಯರ ಮಾರಾಟ ಪ್ರಕರಣಗಳು ಸಮುದಾಯದಲ್ಲಿ ಭೀಕರ ಬಡತನ ಅವರಿಸಿರುವುದನ್ನು ಎತ್ತಿ ತೋರಿಸುತ್ತಿದೆ. ಇತ್ತ ಮನೆಯ ಹಕ್ಕುಗಳು ಇಲ್ಲದೆ, ಅತ್ತ ಉಳುಮೆಗೆ ಭೂಮಿಯೂ ಇಲ್ಲದ ಲಂಬಾಣಿಗರು ಪರಕೀಯರಂತಾಗಿರೊದು ದೇಶಕ್ಕಾಗುವ ಅವಮಾನ ಅಷ್ಟೇ !
ಬಹುದಿನದ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಸದನದಲ್ಲಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಮಸೂದೆ ಮಂಡಿಸಿತ್ತು. ರಾಜ್ಯಪಾಲರು ಈ ಮಸೂದೆಯನ್ನು ಅನುಮೋದಿಸೊ ಬದಲಾಗಿ ರಾಷ್ಟ್ರಪತಿಯವರಿಗೆ ಯಾಕೆ ರವಾನಿಸಿದರು ಎಂದು ತಿಳಿಯದಾಗಿದ್ದೆವೆ. ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವಲ್ಲಿನ ವಿಳಂಬತನ ಸಮುದಾಯಗಳನ್ನು ಮತ್ತಷ್ಟು ಕುಗ್ಗಿಸುತ್ತಿದೆ.
ಕಂದಾಯ ಗ್ರಾಮಗಳಾಗಿಲ್ಲದೆ, ನಾಗರಿಕ ಹಕ್ಕುಗಳಿಂದ ವಂಚಿತರಾಗಿರುವ ಲಂಬಾಣಿಗರನ್ನು ಮುಖ್ಯವಾಹಿನಿ ಉದ್ದೇಶಿತ ‘ ಕರ್ನಾಟಕ ಭೂ ಸುಧಾರಣೆ ವಿಧೇಯಕ-2016’ ಅನುಮೋದನೆ ಮಾಡಲು ಒತ್ತಾಯಿಸಿ 9 ಜುಲೈ 2017 ರಂದು ರಾಜ್ಯ ಎಲ್ಲಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ‘ರಾಷ್ಟ್ರಪತಿಯವರಿಗೆ ಪತ್ರ ಚಳುವಳಿ’ ನಡೆಸಲಿದ್ದೆವೆ.
ಈ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಮಾಧ್ಯಮಗಳ ಬೆಂಬಲ ಅಗತ್ಯವೆಂದು ಭಾವಿಸಿದ್ದೆವೆ. ಅದರಿಂದ ನಿಮ್ಮ ಪತ್ರಿಕೆ/ಟಿವಿಯ ವರದಿಗಾರರು ಮತ್ತು ಛಾಯಾಚಿತ್ರಗಾರರನ್ನು ಕಳುಹಿಸಿಕೊಡಬೇಕಾಗಿ ವಿನಂತಿಸುತ್ತೆವೆ.